ಹೊಸ ಶೂ ಕಚ್ಚುತ್ತಿದೆಯೇ? ಕೂಡಲೇ ಈ ಮನೆಮದ್ದುಗಳನ್ನು ಟ್ರೈ ಮಾಡಿ

Source Credit Kannada.boldsky.com

ಚಪ್ಪಲಿಯ ಕಚ್ಚುವಿಕೆ ಎಂದರೇನು?

ಹೊಸ ಚಪ್ಪಲಿ ನಿಮ್ಮ ಪಾದದ ಗಾತ್ರಕ್ಕೆ ಅನುಗುಣವಾಗಿರುತ್ತದೆಯೇ ವಿನಃ ನಿಮ್ಮ ಪಾದದ ಆಕಾರದಂತಲ್ಲ. ಹಾಗಾಗಿ, ಎಷ್ಟೇ ಆರಾಮದಾಯಕ ಎನಿಸಿದರೂ, ಯಾವುದೋ ಒಂದು ಕಡೆಯಲ್ಲಿ ಚಪ್ಪಲಿಯ ಭಾಗವೊಂದು ಪಾದದ ಆಕಾರಕ್ಕೆ ಹೊಂದಿಕೊಳ್ಳದೇ ಚಿಕ್ಕದಾಗಿ ಒತ್ತುತ್ತಿರುತ್ತದೆ. ಈ ಒತ್ತುವಿಕೆಯಿಂದಲೇ ನಡೆದಾಡುವಾಗ ಅತ್ತಿತ್ತ ಜರುಗುವ ಚಪ್ಪಲಿಯ ಭಾಗ ನಿಧಾನವಾಗಿ ಚರ್ಮವನ್ನು ಹರಿಯುತ್ತದೆ ಅಥವಾ ಸವೆಸುತ್ತದೆ. ಚಪ್ಪಲಿ ಸರಿಯಾದ ಗಾತ್ರದಲ್ಲಿ ಇಲ್ಲದ್ದಿದರೆ ಅಥವಾ ಬಿಗಿಯಾಗಿದ್ದರೆ ಈ ಸವೆತ ಹೆಚ್ಚಾಗುತ್ತದೆ.

ಈ ಸವೆತದಿಂದ ಎದುರಾದ ಗಾಯವೇ ಚಪ್ಪಲಿಯ ಕಚ್ಚುವಿಕೆ. ಇದು ಸಾಮಾನ್ಯವಾಗಿ ಉರಿಯಿಂದ ಕೂಡಿದ್ದು ನಿಲ್ಲುವಾಗ ಅಥವಾ ನಡೆಯುವಾಗ ಹೆಚ್ಚು ನೋವು ಕೊಡುತ್ತದೆ. ಸಾಮಾನ್ಯವಾಗಿ ಚಪ್ಪಲಿಯ ಒಳಭಾಗ ಹೆಚ್ಚಿನ ಒತ್ತಡ ನೀಡುವ ಹಿಮ್ಮಡಿ ಮತ್ತು ಕಾಲುಬೆರಳುಗಳು, ವಿಶೇಷವಾಗಿ ಹೆಬ್ಬೆರಳಿನ ಹೊರಮೈ ಮತ್ತು ಕಿರುಬೆರಳಿನ ಹೊರಮೈ ಭಾಗದಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತದೆ. ಈ ಗಾಯಗಳು ತರಚುಗಾಯದಂತೆಯೇ ಕಾಣುತ್ತವೆ ಹಾಗೂ ಕೆಲವು ಭಾಗದಲ್ಲಿ ಆಣಿಯಂತೆಯೂ ಕಾಣಿಸಿಕೊಳ್ಳುತ್ತವೆ. ಕ್ರಮೇಣ ಈ ಗಾಯಗಳು ಇನ್ನಷ್ಟು ಉಲ್ಬಣಗೊಂಡು ಊತ, ಕೀವುಭರಿತ ಗುಳ್ಳೆ, ನೀರು ತುಂಬಿದ ಗುಳ್ಳೆ ಮತ್ತು ಗುರುತು ಉಳಿಸುವಂತಹ ಗಾಯವಾಗಲು ಸಾಧ್ಯ. ಕೆಲವೊಮ್ಮೆ ಪಾದದ ಬೆವರಿನಿಂದಲೂ ಬಿಗಿಯಾಗಿ ಹಿಡಿದಿದ್ದ ಚಪ್ಪಲಿ ಜಾರಲು ಸಾಧ್ಯವಾಗುವಂತೆ ಮಾಡಿ ಚರ್ಮದ ಮೇಲೆ ಘಾಸಿಯನ್ನುಂಟುಮಾಡುತ್ತದೆ.

ಇದಕ್ಕೆ ನೇರವಾದ ಮತ್ತು ಮೊದಲು ಮಾಡಬೇಕಾದ ಕ್ರಮ ಎಂದರೆ ಕಚ್ಚುವ ಚಪ್ಪಲಿಯನ್ನು ತೊಡುವುದನ್ನು ಬಿಡುವುದು. ಎದುರಾಗಿರುವ ನೋವನ್ನು ನಿವಾರಿಸಲು ಮತ್ತು ಗಾಯವನ್ನು ಗುಣಪಡಿಸಲು ಕೆಲವು ಸುಲಭ ಮನೆಮದ್ದುಗಳನ್ನು ಬಳಸಬಹುದು.

ಚಪ್ಪಲಿ ಕಚ್ಚಿದ ಗಾಯಕ್ಕೆ ಸೂಕ್ತ ಮನೆಮದ್ದುಗಳು

1. ಲೋಳೆ ಸರ: (ಆಲೋವೆರಾ)

ಕೆಲವು ಅಧ್ಯಯನಗಳ ಮೂಲಕ ಲೋಳೆಸರದಲ್ಲಿರುವ ಉರಿಯೂತ ನಿವಾರಕ ಗುಣ ಗಾಯಗಳನ್ನು ಗುಣಪಡಿಸಲು ನೆರವಾಗುತ್ತದೆ. ಪಾದಗಳಲ್ಲಿ ನೀರು ತುಂಬಿದ ಗುಳ್ಳೆಗಳಾಗಿದ್ದರೆ ಈ ವಿಧಾನ ಸೂಕ್ತವಾಗಿದೆ. ಲೋಳೆಸರದಲ್ಲಿರುವ ಗ್ಲೂಕೋಮನ್ನನ್ ಎಂಬ ಪೋಷಕಾಂಶ ಗಾಯಗಳನ್ನು ಶೀಘ್ರವಾಗಿ ಗುಣಪಡಿಸಲು ನೆರವಾಗುತ್ತದೆ.

ಅನುಸರಿಸಬೇಕಾದ ವಿಧಾನ:

ಲೋಳೆಸರದ ಕೋಡಿನ ತಿರುಳನ್ನು ಗುಳ್ಳೆ ಎದುರಾಗಿರುವ ಮತ್ತು ಚಪ್ಪಲಿ ಕಚ್ಚಿರುವ ಭಾಗದ ಮೇಲೆ ನೇರವಾಗಿ ಹಚ್ಚಿ ಹರಡಿ.

ಕೊಂಚ ಹೊತ್ತಿನ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ದಿನಕ್ಕೆರಡು ಬಾರಿ ಈ ವಿಧಾನವನ್ನು ಅನುಸರಿಸಬಹುದು.

2. ಆಲಿವ್ ಎಣ್ಣೆ

ಆಲಿವ್ ಎಣ್ಣೆಯಲ್ಲಿರುವ ಜೈವಿಕ ಸಂಯುಕ್ತಗಳು ಉರಿಯೂತ ನಿವಾರಕ ಗುಣಗಳನ್ನು ಹೊಂದಿವೆ. ಇವು ಉರಿಯೂತವನ್ನು ನಿವಾರಿಸಿ ಗಾಯ ಸುಲಭವಾಗಿ ಒಣಗಲು ನೆರವಾಗುತ್ತವೆ. ಸಾಮಾನ್ಯ ತರಚು ಗಾಯಕ್ಕೆ ಈ ವಿಧಾನ ಸೂಕ್ತವಾಗಿದೆ.

ಅನುಸರಿಸಬೇಕಾದ ವಿಧಾನ:

ಎರಡರಿಂದ ಮೂರು ತೊಟ್ಟು ಆಲಿವ್ ಎಣ್ಣೆಗೆ ಒಂದರಿಂದ ಎರಡು ತೊಟ್ಟು ಬಾದಮಿ ಎಣ್ಣೆ ಬೆರೆಸಿ.

ಈ ಮಿಶ್ರಣವನ್ನು ಗಾಯಗಳ ಮೇಲೆ ಹಚ್ಚಿಕೊಳ್ಳಿ. ದಿನಕ್ಕೆರಡು ಬಾರಿ ಈ ವಿಧಾನವನ್ನು ಅನುಸರಿಸಬಹುದು. ಉರಿ ಇಲ್ಲವಾಗುವವರೆಗೂ ಇದನ್ನು ಹಚ್ಚುವುದನ್ನು ಮುಂದುವರೆಸಿ.

3. ಹಲ್ಲುಜ್ಜುವ ಪೇಸ್ಟ್

ಯಾವುದೇ ಮೆಂಥಾಲ್ ಇರುವ ಹಲ್ಲುಜ್ಜುವ ಪೇಸ್ಟ್ ಉರಿಯನ್ನು ನಿವಾರಿಸಲು ಸಮರ್ಥವಾಗಿದೆ. ಒಂದು ವೇಳೆ ಗಾಯ ಭಾರೀ ಉರಿಯನ್ನು ಹೊಂದಿದ್ದು ಚರ್ಮದ ಹೊರಪದರವನ್ನು ಹಿಸಿದಿದ್ದರೆ ಈ ವಿಧಾನ ಸೂಕ್ತವಾಗಿದೆ.

ಅನುಸರಿಸಬೇಕಾದ ವಿಧಾನ:

ಒಂದು ಸ್ವಚ್ಛ ಹತ್ತಿಯ ತುಂಡಿನಲ್ಲಿ ಅರ್ಧ ಚಮಚದಷ್ಟು ಹಲ್ಲುಜ್ಜುವ ಪೇಸ್ಟ್ ಹಚ್ಚಿ.

ಈ ಹತ್ತಿಯನ್ನು ಗಾಯವಾಗಿರುವ ಭಾಗದ ಮೇಲೆ ಆವರಿಸಿ ಹರಡಿಸಿ. ಪೇಸ್ಟ್ ಚೆನ್ನಾಗಿ ಒಣಗುವವರೆಗೂ ಹಾಗೇ ಬಿಡಿ, ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ.

ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ದಿನಕ್ಕೆರಡು ಬಾರಿ ಈ ವಿಧಾನವನ್ನು ಅನುಸರಿಸಬಹುದು.

4. ಜೇನು

ಜೇನಿನಲ್ಲಿಯೂ ಪ್ರಬಲ ಉರಿಯೂತ ನಿವಾರಕ ಗುಣಗಳಿವೆ ಹಾಗೂ ಬ್ಯಾಕ್ಟೀರಿಯಾ ನಿವಾರಕ ಗುಣಗಳಿವೆ. ಇದು ಗೀರುಗಳಾಗಿದ್ದು ಕೀವು ತುಂಬಿಕೊಂಡಿದ್ದರೆ ಈ ವಿಧಾನ ಸೂಕ್ತವಾಗಿದೆ ಹಾಗೂ ಸೋಂಕನ್ನು ಇನ್ನಷ್ಟು ಹೆಚ್ಚದಂತೆ ತಡೆಯುತ್ತದೆ.

ಅನುಸರಿಸಬೇಕಾದ ವಿಧಾನ:

ಸ್ವಚ್ಛ ಹತ್ತಿಯುಂಡೆಯನ್ನು ಜೇನಿನಲ್ಲಿ ಮುಳುಗಿಸಿ ಕೀವು ತುಂಬಿದ ಭಾಗದ ಮೇಲಿರಿಸಿ ಪಟ್ಟಿ ಮಾಡಿ. ಮುಂದಿನ ಪಟ್ಟಿ ಮಾಡುವ ಸಮಯ ಬಂದಾಗ ಹಳೆಯದನ್ನು ನಿವಾರಿಸಿ. ದಿನಕ್ಕೆ ಮೂರರಿಂದ ನಾಲ್ಕು ಬಾರಿ ಈ ವಿಧಾನವನ್ನು ಅನುಸರಿಸಬಹುದು.

5. ಕೊಬ್ಬರಿ ಎಣ್ಣೆ ಮತ್ತು ಕರ್ಪೂರ

ಕೊಬ್ಬರಿ ಎಣ್ಣೆಯಲ್ಲಿ ಗುಣಪಡಿಸುವ ಮತ್ತು ಉರಿಯೂತ ನಿವಾರಕ ಗುಣಗಳಿವೆ. ಅಲ್ಲದೇ ಇದರಲ್ಲಿರುವ ಲಾರಿಕ್ ಆಮ್ಲ ಅತಿಸೂಕ್ಷ್ಮ ಕ್ರಿಮಿಗಳನ್ನು ನಿವಾರಿಸುವ ಗುಣ ಹೊಂದಿದೆ. ಕರ್ಪೂರದಲ್ಲಿಯೂ ಉರಿಯೂತ ನಿವಾರಕ ಗುಣವಿದ್ದು ಕೊಬ್ಬರಿ ಎಣ್ಣೆಯ ಗುಣಗಳನ್ನು ಇನ್ನಷ್ಟು ವೃದ್ಧಿಸುತ್ತದೆ. ವಿಶೇಷವಾಗಿ ಚಪ್ಪಲಿಯ ಗಾಯದಿಂದ ಆ ಭಾಗ ಊದಿಕೊಂಡಿದ್ದು ಮುಟ್ಟಿದರೆ ಭಾರೀ ನೋವು ಎದುರಾದರೆ ಈ ವಿಧಾನ ಸೂಕ್ತವಾಗಿದೆ. ಅಲ್ಲದೇ ಈ ಸೋಂಕು ಇನ್ನಷ್ಟು ಉಲ್ಬಣಗೊಳ್ಳದಂತೆಯೂ ತಡೆಯುತ್ತದೆ.

ಅನುಸರಿಸಬೇಕಾದ ವಿಧಾನ:

ಒಂದು ದೊಡ್ಡ ಚಮಚ ಕೊಬ್ಬರಿ ಎಣ್ಣೆಯಲ್ಲಿ ಒಂದು ಚಿಕ್ಕ ಚಮಚ ಕರ್ಪೂರದ ಪುಡಿಯನ್ನು ಚೆನ್ನಾಗಿ ಬೆರೆಸಿ ಲೇಪ ತಯಾರಿಸಿ.

ಒಂದು ಸ್ವಚ್ಛ ಹತ್ತಿಯನ್ನು ಬಳಸಿ ಈ ಲೇಪವನ್ನು ಗಾಯದ ಮೇಲೆ ಹಚ್ಚಿ ಚೆನ್ನಾಗಿ ಒಣಗಿದ ಬಳಿಕ ಸ್ವಚ್ಛ ನೀರಿನಿಂದ ತೊಳೆದುಕೊಳ್ಳಿ. ದಿನಕ್ಕೆರಡು ಬಾರಿ ಈ ವಿಧಾನವನ್ನು ಅನುಸರಿಸಬಹುದು.

6. ಕಹಿಬೇವು ಮತ್ತು ಅರಿಶಿನ

ಕಹಿಬೇವಿನ ಎಲೆಗಳಲ್ಲಿರುವ ಕ್ರಿಯಾತ್ಮಕ ಸಂಯುಕ್ತಗಳು ಮತ್ತು ಅರಿಶಿನದಲ್ಲಿರುವ ಕುರ್ಕುಮಿನ್ ಎಂಬ ಪೋಷಕಾಂಶಗಳು ಉರಿಯೂತವನ್ನು ನಿವಾರಿಸಿ ಸೋಂಕನ್ನು ಗುಣಪಡಿಸುತ್ತವೆ. ಇವೆರಡರಲ್ಲಿರುವ ಉರಿಯೂತ ನಿವಾರಕ ಮತ್ತು ಅತಿಸೂಕ್ಷ್ಮಜೀವಿ ನಿವಾರಕ ಗುಣಗಳು ಇಲ್ಲಿ ನೆರವಿಗೆ ಬರುತ್ತವೆ. ಹಾಗಾಗಿ ಕೀವು ತುಂಬಿದ ಗೀರುಗಳುಳ್ಳ ಗಾಯಗಳಾಗಿದ್ದರೆ ಮತ್ತು ಭಾರೀ ಉರಿ ಇದ್ದರೆ ಈ ವಿಧಾನ ಸೂಕ್ತವಾಗಿದೆ.

ಅನುಸರಿಸಬೇಕಾದ ವಿಧಾನ:

ಸಮಪ್ರಮಾಣದಲ್ಲಿ ಇವೆರಡನ್ನೂ ಕೊಂಚ ನೀರಿನೊಂದಿಗೆ ನುಣ್ಣಗೆ ಅರೆಯಿರಿ.

ಈ ಲೇಪವನ್ನು ಗಾಯವಾದೆಡೆ ದಪ್ಪನಾಗಿ ಹಚ್ಚಿ. ಬೆಳಗ್ಗೆ ಹಚ್ಚಿ ಸಾಧ್ಯವಿದ್ದಷ್ಟು ಹೊತ್ತು ಇರಿಸಿ. ರಾತ್ರಿ ಹಚ್ಚಿ ಬೆಳಗ್ಗೆ ನೀರಿನಿಂದ ತೊಳೆದುಕೊಳ್ಳಿ. ದಿನಕ್ಕೆರಡು ಬಾರಿ ಈ ವಿಧಾನವನ್ನು ಅನುಸರಿಸಬಹುದು.

7. ಪೆಟ್ರೋಲಿಯಂ ಜೆಲ್ಲಿ (ವ್ಯಾಸೆಲಿನ್)

ಇದೊಂದು ಅತ್ಯುತ್ತಮ ತೇವಕಾರಕವಾಗಿದೆ. ಇದರ ಹಚ್ಚುವಿಕೆಯಿಂದಲೂ ಅತಿಸೂಕ್ಷ್ಮಜೀವಿಗಳಿಗೆ ಆಮ್ಲಜನಕ ಸಿಗದೇ ಸಾಯುವ ಕಾರಣ ಗಾಯ ಶೀಘ್ರವೇ ಗುಣವಾಗುತ್ತದೆ. ಹಾಗಾಗಿ ಗೀರುಗಳಾದ ಅಥವಾ ಸವೆದ ಗಾಯಗಳಿದ್ದರೆ ಈ ವಿಧಾನ ಸೂಕ್ತವಾಗಿದೆ.

ಅನುಸರಿಸಬೇಕಾದ ವಿಧಾನ:

ಗಾಯವಾದ ಭಾಗದ ಮೇಲೆ ವ್ಯಾಸೆಲಿನ್ ಅನ್ನು ತೆಳುವಾಗಿ ಹಚ್ಚಿ. ಕಾಲುಚೀಲ ಧರಿಸಿ ರಾತ್ರಿಯಿಡೀ ಹಾಗೇ ಇರಲು ಬಿಡಿ.

ಹಗಲಿನ ಸಮಯದಲ್ಲಿ ಯಾವ ಭಾಗದಲ್ಲಿ ಗಾಯವಾಗಿದೆಯೋ ಅಲ್ಲಿ ತಗಲುವ ಚಪ್ಪಲಿ ಅಥವಾ ಶೂವಿನ ಒಳಭಾಗಕ್ಕೆ ಕೊಂಚ ವ್ಯಾಸೆಲಿನ್ ಸವರಿ. ಇದರಿಂದ ಇವುಗಳ ಅಂಚುಗಳು ನಯವಾಗುತ್ತವೆ ಹಾಗೂ ಇನ್ನಷ್ಟು ಗಾಯವಾಗುವುದನ್ನು ತಡೆಯುತ್ತದೆ. ಗಾಯ ಇಲ್ಲವಾಗುವವರೆಗೂ ನಿತ್ಯವೂ ಇದನ್ನು ಅನುಸರಿಸಬಹುದು.

ಚಪ್ಪಲಿಯ ಗಾಯಗಳಾಗದಂತೆ ಯಾವ ಕ್ರಮಗಳನ್ನು ಅನುಸರಿಸಬೇಕು?

ಸರಿಯಾಗಿ ಕುಳಿತುಕೊಳ್ಳದ ಅಥವಾ ಅಸಮರ್ಪಕ ಗಾತ್ರದ ಚಪ್ಪಲಿ ಶೂಗಳ ಧರಿಸುವಿಕೆಯಿಂದ ಇದು ಮೊದಲಾಗಿ ಎದುರಾಗುತ್ತದೆ. ಅಲ್ಲದೇ, ಚಪ್ಪಲಿಯ ಒಳಭಾಗದ ಕೆಲವು ಅಂಚುಗಳು ಅಥವಾ ಮುಳ್ಳಿನಂತೆ ಒಳಭಾಗದಲ್ಲಿ ಉಳಿದುಕೊಂಡಿರುವ ಭಾಗವೂ ಕಚ್ಚಬಹುದು. ಹಾಗಾಗಿ ಇವನ್ನು ಗುರುತಿಸಿ ಬ್ಲೇಡಿನಿಂದ ಕತ್ತರಿಸಿದ ಬಳಿಕವೇ ತೊಡಲು ಪ್ರಾರಂಭಿಸಬೇಕು.

ಕೆಳಗಿನ ಕ್ರಮಗಳನ್ನು ಅನುಸರಿಸುವ ಮೂಲಕ ಈ ಗಾಯಗಳಾಗದಂತೆ ತಡೆಗಟ್ಟಬಹುದು

* ಸದಾ ಚಪ್ಪಲಿ ಮತ್ತು ಶೂಗಳನ್ನು ಕೊಳ್ಳುವ ಮುನ್ನ ಧರಿಸಿ ನಿಮ್ಮ ಪಾದಕ್ಕೆ ಅತಿ ಸೂಕ್ತವಾಗಿವೆ ಎಂದು ಖಚಿತಪಡಿಸಿದ ಬಳಿಕವೇ ಕೊಳ್ಳಿ.

* ಚಪ್ಪಲಿ ಅಥವಾ ಶೂ ಹೊಸದಿದ್ದಾಗ ಒಳಭಾಗದಲ್ಲಿ ಕೊಬ್ಬರಿ ಎಣ್ಣೆ ಅಥವಾ ವ್ಯಾಸೆಲಿನ್ ಹಚ್ಚಿದ ಬಳಿಕ ಧರಿಸಿ. ಪ್ರಾರಂಭದ ಒಂದೆರಡು ದಿನ ಮಾಡಿದರೆ ಸಾಕು. ವಿಶೇಷವಾಗಿ ಚರ್ಮದ ಚಪ್ಪಲಿ ಶೂಗಳಿಗೆ ಈ ಕ್ರಮವನ್ನು ಅನುಸರಿಸುವ ಮೂಲಕ ಇವು ಮೃದುವಾಗಿ ಕಚ್ಚದೇ ಇರಲು ಸಾಧ್ಯವಾಗುತ್ತದೆ.

* ಚಪ್ಪಲಿಯ ಒಳಭಾಗದಲ್ಲಿ ಅಂಟು ಪಟ್ಟಿಯನ್ನು (adhesive pads) ಅಳವಡಿಸಬಹುದು. ಶೂ ಒಳಭಾಗದಲ್ಲಿ, ಹಿಮ್ಮಡಿ ಬರುವ ಮೇಲ್ಭಾಗದಲ್ಲಿ ಇವನ್ನು ಸ್ಥಾಪಿಸುವ ಮೂಲಕ ಶೂ ಅತ್ತಿತ್ತ ಅಲ್ಲಾಡದಂತೆ ತಪ್ಪಿಸಲು ಸಾಧ್ಯವಾಗುತ್ತದೆ.

* ಕಾಲು ಬೆರಳುಗಳನ್ನು ಘಾಸಿಯಿಂದ ತಪ್ಪಿಸುವ toe protectors ಎಂಬ ಪಟ್ಟಿಗಳನ್ನೂ ಉಪಯೋಗಿಸಬಹುದು. ಇವು ಸಹಾ ಅಂಟುಪಟ್ಟಿಯಂತೆಯೇ ಇದ್ದು ಶೂ ವಿನ ಒಳಭಾಗದ ಮುಂಭಾಗದಲ್ಲಿ, ಅಂದರೆ ಕಾಲು ಬೆರಳುಗಳು ತಾಕುವಲ್ಲಿ ಅಂಟಿಸಬೇಕು. ವಿಶೇಷವಾಗಿ ಹೆಬ್ಬೆರಳು ಮತ್ತು ಕಿರುಬೆರಳುಗಳು ತಾಕುವಲ್ಲಿ ಇವು ಇರುವಂತೆ ನೋಡಿಕೊಳ್ಳಿ. ಇದರಿಂದ ಈ ಭಾಗದಲ್ಲಿ ಗುಳ್ಳೆಗಳಾಗದಂತೆ ತಪ್ಪಿಸಬಹುದು.

* ಸದಾ ಶೂವನ್ನು ಕಾಲುಚೀಲ ಧರಿಸಿಯೇ ತೊಟ್ಟುಕೊಳ್ಳಿ.

ಈ ವಿಧಾನಗಳನ್ನು ಅನುಸರಿಸುವ ಮೂಲಕ ನಿಮ್ಮ ನೆಚ್ಚಿನ ಪಾದರಕ್ಷೆಗಳನ್ನು ಯಾವುದೇ ದುಗುಡವಿಲ್ಲದೇ ಧರಿಸಬಹುದು.

Source Credit Kannada.boldsky.com

“This story was auto-published from a syndicated feed & Website. No part of the story has been edited by Niranthara News”

Niranthara News

Leave a Reply

Your email address will not be published. Required fields are marked *

Next Post

ಶುಕ್ರವಾರದ ದಿನ ಭವಿಷ್ಯ (27-12-2019)

Sat Dec 28 , 2019
Source Credit Kannada.boldsky.com Pin it Email https://nirantharanews.com/%e0%b2%b9%e0%b3%8a%e0%b2%b8-%e0%b2%b6%e0%b3%82-%e0%b2%95%e0%b2%9a%e0%b3%8d%e0%b2%9a%e0%b3%81%e0%b2%a4%e0%b3%8d%e0%b2%a4%e0%b2%bf%e0%b2%a6%e0%b3%86%e0%b2%af%e0%b3%87-%e0%b2%95%e0%b3%82%e0%b2%a1/#MS0xNTc3Mzc1NDQ ಮೇಷ ರಾಶಿ ವೈಯಕ್ತಿಕ ಜೀವನದಲ್ಲಿ ಯಾವುದೇ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ಇಂದು ಕೆಲವು ದೃಢವಾದ ಮತ್ತು ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗಬಹುದು. ಇಂದು ಮನೆಯಲ್ಲಿ ನಿಮ್ಮ ವಿರುದ್ಧ ಪ್ರತಿಭಟನೆಯ ಧ್ವನಿ ಕೇಳಬಹುದು, ಆದರೆ ನೀವು ನಿರ್ಧಾರಗಳನ್ನು ವಸ್ತುನಿಷ್ಠವಾಗಿ ತೆಗೆದುಕೊಳ್ಳಬೇಕು. ಇಂದು ಬುದ್ಧಿವಂತಿಕೆಯಿಂದ ಖರ್ಚು ಮಾಡಿ. ಹಣಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ನೀವು ತರಾತುರಿಯಲ್ಲಿ ನಿರ್ಧಾರ ತೆಗೆದುಕೊಳ್ಳದಿದ್ದರೆ ಉತ್ತಮ. ಇಂದು, ಕಚೇರಿಯಲ್ಲಿ ಸಹೋದ್ಯೋಗಿ ನಿಮ್ಮ ಕಿರಿಕಿರಿಗೆ ಕಾರಣವಾಗಬಹುದು. ಅಂತಹ ಪರಿಸ್ಥಿತಿಯಲ್ಲಿ ಕೆಲಸದ ಬಗ್ಗೆ ಗಮನಹರಿಸುವುದು ಸ್ವಲ್ಪ ಕಷ್ಟಕರವಾಗಿರುತ್ತದೆ, ಆದರೆ […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links