ಕನ್ನಡ ರಾಜ್ಯೋತ್ಸವ ವಿಶೇಷ : ಕನ್ನಡ ನಾಡಿನ ಕುರಿತ ಅದ್ಬುತ ಸಾಹಿತ್ಯಗಳು

Source Credit Kannada.boldsky.com

1. ಕುವೆಂಪು

ಎಲ್ಲಾದರು ಇರು ಎಂತಾದರು ಇರು ||೨||

ಎಂದೆಂದಿಗೂ ನೀ ಕನ್ನಡವಾಗಿರು

ಕನ್ನಡವೇ ಸತ್ಯ, ಕನ್ನಡವೇ ನಿತ್ಯ

ಕನ್ನಡ ಗೋವಿನ ಓ ಮುದ್ದಿನ ಕರು ||೨||

ಕನ್ನಡತನ ಒಂದಿದ್ದರೆ, ಅಮ್ಮಗೆ ಕಲ್ಪತರು

ಕನ್ನಡವೇ ಸತ್ಯ, ಕನ್ನಡವೇ ನಿತ್ಯ

ಎಲ್ಲಾದರು ಇರು ಎಂತಾದರು ಇರು

ಎಂದೆಂದಿಗೂ ನೀ ಕನ್ನಡವಾಗಿರು

ನೀ ಮೆಟ್ಟುವ ನೆಲ, ಅದೆ ಕರ್ನಾಟಕ

ನೀನೇರುವ ಮಲೆ ಸಹ್ಯಾದ್ರಿ

ನೀ ಮೆಟ್ಟುವ ನೆಲ, ಅದೆ ಕರ್ನಾಟಕ

ನೀನೇರುವ ಮಲೆ ಸಹ್ಯಾದ್ರಿ

ನೀ ಮುಟ್ಟುವ ಮರ ಶ್ರೀಗಂಧದ ಮರ ||೨||

ನೀ ಕುಡಿಯುವ ನೀರ್ ಕಾವೇರಿ

ಪಂಪನ ಓದುವ ನಿನ್ನಾ ನಾಲಗೆ

ಕನ್ನಡವೇ ಸತ್ಯ

ಕುಮಾರವ್ಯಾಸನ ಆಲಿಪ ಕಿವಿಯದು

ಕನ್ನಡವೇ ನಿತ್ಯ

ಎಲ್ಲಾದರು ಇರು ಎಂತಾದರು ಇರು

ಎಂದೆಂದಿಗೂ ನೀ ಕನ್ನಡವಾಗಿರು

ಹರಿಹರ ರಾಘವರಿಗೆ ಎರಗುವ ಮನ

ಹಾಳಾಗಿಹ ಹಂಪೆಗೆ ಕೊರಗುವ ಮನ

ಹರಿಹರ ರಾಘವರಿಗೆ ಎರಗುವ ಮನ

ಹಾಳಾಗಿಹ ಹಂಪೆಗೆ ಕೊರಗುವ ಮನ

ಬೆಳ್ಗೊಳ ಬೇಲೂರ್‍ಗಳ ನೆನೆಯುವ ಮನ

ಮಲೆನಾಡಿಗೆ ಹೊಂಪುಳಿ ಹೋಗುವ ಮನ

ಕಾಜಾಣಕೆ ಗಿಳಿ, ಕೋಗಿಲೆ ಇಂಪಿಗೆ

ಮಲ್ಲಿಗೆ ಸಂಪಿಗೆ ಕೇದಗೆ ಸೊಂಪಿಗೆ

ಕಾಜಾಣಕೆ ಗಿಳಿ, ಕೋಗಿಲೆ ಇಂಪಿಗೆ

ಮಲ್ಲಿಗೆ ಸಂಪಿಗೆ ಕೇದಗೆ ಸೊಂಪಿಗೆ

ಮಾವಿನ ಹೊಂಗೆಯ ತಳಿರಿನ ತಂಪಿಗೆ

ರೋಮಾಂಚನಗೊಳುವಾ ತನು ಮನ

ಕನ್ನಡವೇ ಸತ್ಯ, ಕನ್ನಡವೇ ನಿತ್ಯ

ಎಲ್ಲಾದರು ಇರು ಎಂತಾದರು ಇರು

ಎಂದೆಂದಿಗು ನೀ ಕನ್ನಡವಾಗಿರು

ಎಲ್ಲಿದ್ದರೆ ಏನ್ ಎಂತಿದ್ದರೆ ಏನ್

ಎಲ್ಲಿದ್ದರೆ ಏನ್ ಎಂತಿದ್ದರೆ ಏನ್

ಎಂದೆಂದಿಗು ತಾನ್ ಕನ್ನಡವೇ ಸತ್ಯ ಕನ್ನಡವೇ ನಿತ್ಯ

ಅನ್ಯವೆನಲದೆ ಮಿಥ್ಯ

2. ಡಿಎಸ್‌ ಕರ್ಕಿ

ಹಚ್ಚೇವು ಕನ್ನಡದ ದೀಪ

ಕರುನಾಡ ದೀಪ ಸಿರಿನುಡಿಯ ದೀಪ

ಒಲವೆತ್ತಿ ತೋರುವ ದೀಪ || ಪ ||

ಬಹುದಿನಗಳಿಂದ ಮೈಮರೆವೆಯಿಂದ

ಕೂಡಿರುವ ಕೊಳೆಯ ಕೊಚ್ಚೇವು

ಎಲ್ಲೆಲ್ಲಿ ಕನ್ನಡದ ಕಂಪು ಸೂಸ-

ಲಲ್ಲಲ್ಲಿ ಕರಣ ಚಾಚೇವು

ನಡುನಾಡೆ ಇರಲಿ, ಗಡಿನಾಡೆ ಇರಲಿ

ಕನ್ನಡದ ಕಳೆಯ ಕೆಚ್ಚೇವು

ಮರೆತೇವು ಮರವ ತೆರೆದೇವು ಮನವ

ಎರೆದೇವು ಒಲವ – ಹಿಡಿ ನೆನಪ

ನರನರವನೆಲ್ಲ ಹುರಿಗೊಳಿಸಿ ಹೊಸೆದು

ಹಚ್ಚೇವು ಕನ್ನಡದ ದೀಪ.|| 1 ||

ಕಲ್ಪನೆಯ ಕಣ್ಣು ಹರಿವನಕ ಸಾಲು

ದೀಪಗಳ ಬೆಳಕ ಬೀರೇವು

ಹಚ್ಚಿರುವ ದೀಪದಲಿ ತಾಯರೂಪ

ಅಚ್ಚಳಿಯದಂತೆ ತೋರೇವು

ಒಡಲೊಡಲ ಕೆಚ್ಚಿನ ಕಿಡಿಗಳನ್ನು

ಗಡಿನಾಡಿನಾಚೆ ತೂರೇವು

ಹೊಮ್ಮಿರಲು ಪ್ರೀತಿ ಎಲ್ಲಿನದು ಭೀತಿ?

ನಾಡೊಲವೆ ನೀತಿ ಹಿಡಿನೆನಪ

ಮನೆಮನೆಗಳಲ್ಲಿ ಮನಮನಗಳಲ್ಲಿ ಹಚ್ಚೇವು ಕನ್ನಡದ ದೀಪ || ೨ ||

ಕರುನಾಡಿನರಿವ ನೆರೆತೀವಿ ಭಾವ

ದಲಿ ಜೀವನಾಡಿ ನುದಿಸೇವು

ತೆರೆತೆರೆದ ಕಣ್ಣಿನಲಿ ನೇಹವೆರೆದು

ನವ ಜ್ಯೋತಿಯನ್ನೆ ಮುಡಿಸೇವು

ನಮ್ಮನ್ನವುಂಡು ಅನ್ಯಾಯಗೈಯು-

ವಂಥವರ ಹುಚ್ಚ ಬಿಡಿಸೇವು

ಇಹುದೆಮಗೆ ಛಲವು, ಕನ್ನಡಿಗರ ಬಲವು

ಕನ್ನಡದ ಒಲವು – ಹಿಡಿ ನೆನವು

ನಮ್ಮೆದೆಯ ಕೆಚ್ಚುನೆಚ್ಚುಗಳನೂಡಿ

ಹಚ್ಚೇವು ಕನ್ನಡದ ದೀಪ || ೩ ||

ನಮ್ಮವರು ಗಳಿಸಿದ ಹೆಸರುಳಿಸಲು

ಎಲ್ಲಾರು ಒಂದುಗೂಡೇವು

ನಮ್ಮೆದೆಯ ಮಿಡಿಯುವೀ ಮಾತಿನಲ್ಲಿ

ಮಾತೆಯನು ಪೂಜೆಮಾಡೇವು

ನಮ್ಮುಸಿರು ತೀಡುವೀ ನಾಡಿನಲ್ಲಿ

ಮಾಂಗಲ್ಯಗೀತ ಹಾಡೇವು

ತೊರೆದೇವು ಮರುಳ ಕಡೆದೇವು ಇರುಳ

ಪಡೆದೇವು ತಿರುಳ ಹಿರಿನೆನಪಾ

ಕರುಳೆಂಬ ಕುಡಿಗೆ ಮಿಂಚನ್ನೆ ಮುಡಿಸಿ

ಹಚ್ಚೇವು ಕನ್ನಡದ ದೀಪ|| ೪ ||

3. ಕುವೆಂಪು

ಬಾರಿಸು ಕನ್ನಡ ಡಿಂಡಿಮವ

ಓ ಕರ್ನಾಟಕ ಹೃದಯ ಶಿವ

ಬಾರಿಸು ಕನ್ನಡ ಡಿಂಡಿಮವ

ಸತ್ತಂತಿಹರನು ಬಡಿದೆಚ್ಚರಿಸು

ಕಚ್ಚಾಡುವರನು ಕೂಡಿಸಿ ಒಲಿಸು

ಹೊಟ್ಟೆಯ ಕಿಚ್ಚಿಗೆ ಕಣ್ಣೀರ್ ಸುರಿಸು

ಒಟ್ಟಿಗೆ ಬಾಳುವ ತೆರದಲಿ ಹರಸು

ಬಾರಿಸು ಕನ್ನಡ ಡಿಂಡಿಮವ ||

ಚೈತ ಶಿವೇತರ ಕೃತಿ ಕೃತಿಯಲ್ಲಿ

ಮೂಡಲಿ ಮಂಗಳ ಮತಿ ಮತಿಯಲ್ಲಿ

ಕವಿ ಋಷಿ ಸಂತರ ಆದರ್ಶದಲಿ

ಸರ್ವೋದಯವಾಗಲಿ ಸರ್ವರಲಿ

ಬಾರಿಸು ಕನ್ನಡ ಡಿಂಡಿಮವ

ಹುಯಿಲಗೋಳ ನಾರಾಯಣರು

ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು

ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು

ಬದುಕು ಬಲುಹಿನ ನಿಧಿಯು ಸದಭಿಮಾನದ ಗೂಡು || ಪ ||

ರಾಜನ್ಯರಿಪು ಪರಶುರಾಮನಮ್ಮನ ನಾಡು

ಆ ಜಲಧಿಯನೆ ಜಿಗಿದ ಹನುಮನುದಿಸಿದ ನಾಡು

ಓಜೆಯಿಂ ಮೆರೆದರಸುಗಳ ಸಾಹಸದ ಸೂಡು

ತೇಜವನು ನಮಗೀವ ವೀರವೃಂದದ ಬೀಡು

ಲೆಕ್ಕಿಗಮಿತಾಕ್ಷರರು ಬೆಳೆದು ಮೆರೆದಿಹ ನಾಡು

ಜಕ್ಕಣನ ಶಿಲ್ಪ ಕಲೆಯಚ್ಚರಿಯ ಕರುಗೋಡು

ಚೊಕ್ಕ ಮತಗಳ ಸಾರಿದವರಿಗಿದು ನೆಲೆವೀಡು

ಬೊಕ್ಕಸದ ಕಣಜವೈ ವಿದ್ವತ್ತೆಗಳ ಕಾಡು

ಪಾವನೆಯರಾ ಕೃಷ್ಣೆ ಭೀಮೆಯರ ತಾಯ್ನಾಡು

ಕಾವೇರಿ ಗೋದೆಯರು ಮೈದೊಳೆವ ನಲುನಾಡು

ಆವಗಂ ಸ್ಫೂರ್ತಿಸುವ ಕಬ್ಬಿಗರ ನಡೆಮಾಡು

ಕಾವ ಗದುಗಿನ ವೀರನಾರಾಯಣನ ಬೀಡು.

ಉದಯವಾಯಿತು ನಮ್ಮ ಚೆಲುವ ನಮ್ಮ ಕನ್ನಡ ನಾಡು

– ಕೆ. ಎಸ್. ನಿಸಾರ್ ಅಹಮದ್

ನಿತ್ಯೋತ್ಸವ

ಜೋಗದ ಸಿರಿ ಬೆಳಕಿನಲ್ಲಿ ತುಂಗೆಯ ತೆನೆ ಬಳುಕಿನಲ್ಲಿ,

ಸಹ್ಯಾದ್ರಿಯ ಲೋಹದದಿರ ಉತ್ತುಂಗದ ನಿಲುಕಿನಲ್ಲಿ,

ನಿತ್ಯ ಹರಿದ್ವರ್ಣವನದ ತೇಗ ಗಂಧ ತರುಗಳಲ್ಲಿ

ನಿತ್ಯೋತ್ಸವ, ತಾಯಿ, ನಿತ್ಯೋತ್ಸವ ನಿನಗೆ…

ಇತಿಹಾಸದ ಹಿಮದಲ್ಲಿನ ಸಿಂಹಾಸನ ಮಾಲೆಯಲ್ಲಿ,

ಗತ ಸಾಹಸ ಸಾರುತಿರುವ ಶಾಸನಗಳ ಸಾಲಿನಲ್ಲಿ,

ಓಲೆ ಗರಿಯ ಸಿರಿಗಳಲ್ಲಿ, ದೇಗುಲಗಳ ಭಿತ್ತಿಗಳಲಿ

ನಿತ್ಯೋತ್ಸವ ತಾಯಿ, ನಿತ್ಯೋತ್ಸವ ನಿನಗೆ….

ಹಲವೆನ್ನದ ಹಿರಿಮೆಯೆ, ಕುಲವೆನ್ನದ ಗರಿಮೆಯೆ,

ಸದ್ವಿಕಾಸಶೀಲ ನುಡಿಯ ಲೋಕಾವೃತ ಸೀಮೆಯೆ,

ಈ ವತ್ಸರ ನಿರ್ಮತ್ಸರ ಮನದುದಾರ ಮಹಿಮೆಯೆ

ನಿತ್ಯೋತ್ಸವ, ತಾಯಿ, ನಿತ್ಯೋತ್ಸವ ನಿನಗೆ

Source Credit Kannada.boldsky.com

Niranthara News

Leave a Reply

Your email address will not be published. Required fields are marked *

Next Post

'ರಂಗನಾಯಕಿ' ಎದುರು ನಿಂತ 'ದಂಡುಪಾಳ್ಯ' ಗ್ಯಾಂಗ್

Thu Oct 31 , 2019
Source Credit Kannada.boldsky.com Pin it Email https://nirantharanews.com/%e0%b2%95%e0%b2%a8%e0%b3%8d%e0%b2%a8%e0%b2%a1-%e0%b2%b0%e0%b2%be%e0%b2%9c%e0%b3%8d%e0%b2%af%e0%b3%8b%e0%b2%a4%e0%b3%8d%e0%b2%b8%e0%b2%b5-%e0%b2%b5%e0%b2%bf%e0%b2%b6%e0%b3%87%e0%b2%b7-%e0%b2%95/#cmVkLmpwZw== News oi-Naveen Ms | Published: Thursday, October 31, 2019, 17:47 [IST] ನಾಳೆ (ನವೆಂಬರ್ 1) ಕನ್ನಡ ರಾಜ್ಯೋತ್ಸವ ಈ ವಿಶೇಷವಾಗಿ ಕನ್ನಡದ ಎರಡು ಸಿನಿಮಾಗಳು ಬಿಡುಗಡೆ ಆಗುತ್ತಿವೆ. ‘ರಂಗನಾಯಕಿ’ ಎದುರು ‘ದಂಡುಪಾಳ್ಯ’ ಗ್ಯಾಂಗ್ ನಿಂತುಕೊಂಡಿದೆ. ಅದಿತಿ ಪ್ರಭುದೇವ ನಟನೆಯ ‘ರಂಗನಾಯಕಿ’ ಹಾಗೂ ಸುಮನಾ ರಂಗನಾಥ್ ಅಭಿನಯದ ‘ದಂಡುಪಾಳ್ಯಂ 4 ಸಿನಿಮಾ ಈ ಶುಕ್ರವಾರ ಬಿಡುಗಡೆ ಆಗುತ್ತಿದೆ. ಈ ಎರಡು ಸಿನಿಮಾಗಳು ನಾಯಕಿ ಪ್ರಧಾನವಾಗಿವೆ. ದಂಡುಪಾಳ್ಯಂ 4 ಟ್ರೈಲರ್: ಮುಂದುವರಿದ ರಕ್ಕಸರ […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links