‘ಕಥಾ ಸಂಗಮದ ಒಳಗಿದೆ ನನ್ನ ಸಂಭ್ರಮ’:– ಕಿರಣ್ ರಾಜ್

Source Credit Filmibeat.com

`ಕಬ್ಬಿನ ಹಾಲು’ ಕಿರುಚಿತ್ರ ನಿಮ್ಮನ್ನು ಬೆಂಗಳೂರಿಗನನ್ನಾಗಿಸಿದ ಬಗೆ ಹೇಗೆ?

ಡಾ.ವಿಷ್ಣುವರ್ಧನ್ ಅವರ ಮೂರನೇ ಪುಣ್ಯತಿಥಿಯಾರ್ಥ ಬೆಂಗಳೂರಿನಲ್ಲಿ ಕಿರುಚಿತ್ರ ಸ್ಪರ್ಧೆ ಏರ್ಪಡಿಸಲಾಗಿತ್ತು. ಅದರಲ್ಲಿ ನನ್ನ `ಕಬ್ಬಿನ ಹಾಲು’ ಕಿರುಚಿತ್ರಕ್ಕೆ ಪ್ರಥಮ ಸ್ಥಾನ ದೊರಕಿತ್ತು. ಅದರ ತೀರ್ಪುಗಾರರರಲ್ಲೊಬ್ಬರಾಗಿದ್ದ ನಿರ್ದೇಶಕ ಜಯತೀರ್ಥ ಅವರು, ತಮ್ಮ `ಟೋನಿ’ ಚಿತ್ರಕ್ಕೆ ಸಹಾಯಕ ನಿರ್ದೇಶಕನಾಗುವಂತೆ ನನ್ನನ್ನು ಆಹ್ವಾನಿಸಿದರು. ಅವರ ಜತೆಗಿದ್ದ ನನ್ನನ್ನು ಪರಿಚಯ ಮಾಡಿಕೊಂಡ ಇಮ್ರಾನ್ ಸರ್ದಾರಿಯ ಅವರು ನನ್ನನ್ನು ತಮ್ಮ `ಎಂದೆಂದಿಗೂ’ ಚಿತ್ರಕ್ಕೆ ಅಸಿಸ್ಟೆಂಟ್ ಆಗಿ ನೇಮಿಸಿಕೊಂಡರು. ಆ ಚಿತ್ರದ ಬಳಿಕ ಅದರ ನಿರ್ಮಾಪಕ ಎಸ್.ವಿ ಬಾಬು ಅವರು ನಿರ್ಮಿಸಿದ ಮತ್ತೊಂದು ಚಿತ್ರ `ರಿಕ್ಕಿ’ಯಲ್ಲಿ ನಿರ್ದೇಶಕ ರಿಷಭ್ ಸರ್ ಮೂಲಕ ನನಗೆ ಅವಕಾಶ ಮಾಡಿಕೊಟ್ಟರು. ಹಾಗೆ ಬೆಂಗಳೂರೇ ತವರಾಯಿತು!

ಅಸೋಸಿಯೇಟ್ ನಿರ್ದೇಶಕರಾಗಿದ್ದ ನೀವು ಕಥಾ ಸಂಗಮದ ಮೂಲಕ ನಿರ್ದೇಶಕರಾದ ಬಗ್ಗೆ ಹೇಳಿ

ನಾನು ಅದಾಗಲೇ `ಉಳಿದವರು ಕಂಡಂತೆ’ ಚಿತ್ರ ನೋಡಿ ರಕ್ಷಿತ್ ತಂಡದ ಫ್ಯಾನ್ ಆಗಿದ್ದೆ. ಹಾಗೆ `ರಿಕ್ಕಿ’ ಮತ್ತು ಅದರ ಬಳಿಕ `ಕಿರಿಕ್ ಪಾರ್ಟಿ’ ಚಿತ್ರದಲ್ಲಿ ಕೆಲಸ ಮಾಡುವ ಅವಕಾಶ ನನಗೆ ಲಭಿಸಿತು. ಹಾಗೆ ಕಿರಿಕ್ ಪಾರ್ಟಿ ಚಿತ್ರದ ಮೂಲಕ ಅವರ ಬರಹಗಾರರ ತಂಡದಲ್ಲಿ ಪ್ರಮುಖ ಅಸೋಸಿಯೇಟಾಗಿ ಗುರುತಿಸಿಕೊಂಡೆ. ಅದರ ಬಳಿಕ `ಕಥಾ ಸಂಗಮ’ದ ಏಳು ಸಿನಿಮಾಗಳಲ್ಲಿ ಒಂದು ಚಿತ್ರ ಮತ್ತು ರಕ್ಷಿತ್ ಅವರ ನಾಯಕತ್ವದ `ಚಾರ್ಲಿ’ ಚಿತ್ರ ನಿರ್ದೇಶಿಸುವ ಅವಕಾಶ ಲಭಿಸಿತು.

`ಕಥಾ ಸಂಗಮ’ದಲ್ಲಿ ನಿಮ್ಮ ಕಿರುಚಿತ್ರವೂ ಸೇರಿಕೊಂಡಿದ್ದು ಹೇಗೆ?

ರಿಕ್ಕಿ ಸಿನಿಮಾ ಶೂಟಿಂಗ್ ಸಂದರ್ಭದಲ್ಲಿ ಈ ಕತೆ ಹೇಳಿದಾಗ ಅದರಲ್ಲಿನ ಎರಡು ಪಾತ್ರಗಳನ್ನು ರಕ್ಷಿತ್ ಮತ್ತು ರಿಷಭ್ ಮಾಡುವುದಾಗಿ ತೀರ್ಮಾನವಾಗಿತ್ತು. ಆದರೆ ಅದೇ ಸೆಟ್ ನಲ್ಲಿದ್ದ ಹರಿಪ್ರಿಯಾ ಈ ಕತೆ ಕೇಳಿದಾಗ ಇದರಲ್ಲಿ ರಕ್ಷಿತ್ ಬದಲಿಗೆ ಯಾರಾದರೂ ಹುಡುಗಿ ಇದ್ದರೆ ಇನ್ನಷ್ಟು ಇಂಪ್ರೆಸಿವ್ ಆಗಿರುತ್ತದೆ ಎಂದರು. ನನಗೂ ಅದು ಸರಿ ಅನಿಸಿತು. ಹಾಗೆ ಆ ಪಾತ್ರ ಹರಿಪ್ರಿಯಾ ಅವರಿಗೇ ನೀಡಲಾಯಿತು. ಮಾತ್ರವಲ್ಲ, ಆಗ ಅದನ್ನು ಒಂದು ಪ್ರತ್ಯೇಕ ಕಿರುಚಿತ್ರವಾಗಿ ಮಾಡಬೇಕು ಎಂದುಕೊಂಡಿದ್ದೆವು. ಆದರೆ `ಕಥಾ ಸಂಗಮ’ದ ಯೋಜನೆ ಬಂದಾಗ ಈ ಕಿರುಚಿತ್ರವನ್ನು ಕೂಡ ಅದರಲ್ಲಿ ಸೇರಿಸುವ ಯೋಜನೆ ಹಾಕಲಾಯಿತು.

ನೀವು ಕಂಡ ಹಾಗೆ ರಕ್ಷಿತ್ ಮತ್ತು ರಿಷಭ್ ಶೆಟ್ಟಿಯವರ ನಿರ್ದೇಶನದ ಶೈಲಿ ಹೇಗಿರುತ್ತದೆ?

ರಿಷಭ್ ಸರ್ ಯಾವಾಗಲೂ ಎನರ್ಜೆಟಿಕ್ ಆಗಿರುತ್ತಾರೆ. ನಿರ್ದೇಶಕರಾಗಿ ಅವರ ಎನರ್ಜಿಯನ್ನು ಬ್ರೇಕ್ ಮಾಡುವ ಇನ್ನೊಬ್ಬರು ನಮ್ಮ ಇಂಡಸ್ಟ್ರಿಯಲ್ಲಿ ಇದ್ದಾರ ಎಂದು ನನಗೆ ಗೊತ್ತಿಲ್ಲ. ಚಿತ್ರೀಕರಣದ ವೇಳೆ ಏನೇ ಅಡಚಣೆಗಳು ಎದುರಾದರೂ ಅವುಗಳಿಗೆ ತಲೆ ಕೆಡಿಸಿಕೊಂಡು ಕುಳಿತುಕೊಳ್ಳುವ ಜಾಯಮಾನ ರಿಷಭ್ ಅವರದ್ದಲ್ಲ. ತಕ್ಷಣವೇ ಅದನ್ನು ಪರಿಹರಿಸಿಕೊಂಡು ಮುನ್ನುಗ್ಗುತ್ತಾರೆ. ಆದರೆ ರಕ್ಷಿತ್ ಸರ್ ಅದಕ್ಕೆ ಡೆಡ್ ಅಪೊಸಿಟ್ ಎಂದು ಹೇಳಬಹುದು. ಸೈಲೆಂಟಾಗಿ, ಕಾಮಾಗಿ, ಕೂಲ್ ಆಗಿ ತಮ್ಮ ಕೆಲಸ ಮಾಡುತ್ತಾ ಹೋಗುತ್ತಾರೆ. ನನಗೆ ಇಬ್ಬರ ಶೈಲಿಯೂ ಇಷ್ಟವಾಗುತ್ತದೆ.

`ಸಾಗರ ಸಂಗಮ’ ಚಿತ್ರದ ಶೂಟಿಂಗ್ ನಡೆದಾಗ ಘಟಿಸಿದ ವಿಶೇಷ ಅನುಭವ ಏನಾದರೂ ಇದೆಯೇ?

ಆರಂಭದಲ್ಲಿ ಚಿತ್ರಕ್ಕೆ ಹೆಸರಿಟ್ಟಿರಲಿಲ್ಲ! ಹರಿಪ್ರಿಯ ನಿರ್ವಹಿಸಿರುವ ಪಾತ್ರಕ್ಕೆ ಒಂದು ಅಸಹಾಯಕ ಪರಿಸ್ಥಿತಿ ನಿರ್ಮಾಣವಾಗುವಂಥ ಲೊಕೇಶನ್ ಬೇಕಾಗಿತ್ತು. ರಾಮೇಶ್ವರದಲ್ಲಿ ಧನುಷ್ಕೋಡಿಯಲ್ಲಿ ಅಂಥ ಜಾಗ ಸಿಗಬಹುದೆಂದು ಹೋಗಿದ್ದೆ. ವಿಶೇಷ ಏನೆಂದರೆ ನನ್ನ ಚಿತ್ರದಲ್ಲಿ ರಿಷಭ್, ಹರಿಪ್ರಿಯಾ ಮತ್ತು ರೂಮಿ ಎನ್ನುವ ನಾಯಿ ಸೇರಿದಂತೆ ಇದ್ದಿದ್ದು ಮೂರೇ ಪಾತ್ರಗಳು. ಅದಕ್ಕೆ ಪೂರಕವಾಗಿ ಧನುಷ್ಕೋಡಿಯಲ್ಲಿ ಮೂರು ಸಾಗರಗಳ ಸಂಗಮದ ಸ್ಥಳವಿತ್ತು! ಆಗಲೇ `ಸಾಗರ ಸಂಗಮ’ ಎನ್ನುವ ಹೆಸರು ಪಕ್ಕ ಮಾಡಿಕೊಂಡೆ. ಅದರಲ್ಲಿಯೂ ಸೌಮ್ಯ ಮತ್ತು ಉಗ್ರವಾದ ಎರಡು ಪಾತ್ರಗಳನ್ನು ಪ್ರತಿನಿಧಿಸುವಂತೆ ಒಂದು ಕಡಲು ಸೌಮ್ಯವಾಗಿಯೂ ಮತ್ತೊಂದು ಉಗ್ರವಾದ ಅಲೆಗಳೊಂದಿಗೂ ಕೂಡಿತ್ತು. ನಾವು ಅಲ್ಲಿಗೆ ಹೋದ ಸಂದರ್ಭದಲ್ಲಿ ಹೊಸದಾಗಿ ರಸ್ತೆಯ ಕೆಲಸ ಬೇರೆ ನಡೆದಿದ್ದ ಕಾರಣ ಪ್ರವಾಸಿಗರ ಸಂಖ್ಯೆಯೂ ಬೆರಳೆಣೆಕೆಯಲ್ಲಿತ್ತು. ಹೀಗೆ ಚಿತ್ರೀಕರಣಕ್ಕೆ ಪೂರಕವಾದ ಸ್ಥಳ ಮತ್ತು ವಾತಾವರಣ ಕೂಡಿ ಬಂದಿದ್ದು ನನಗೆ ಮರೆಯಲಾಗದ ಸಂಗತಿ.

ನಿಮ್ಮ ಸಿನಿಮಾದ ಇತರ ತಂತ್ರಜ್ಞರಾಗಿ ಯಾರಿದ್ದಾರೆ?

ತಾರಾಗಣದ ಬಗ್ಗೆ ನಿಮಗೆ ಗೊತ್ತೇ ಇದೆ. ವೆಂಕಟೇಶ್ ಅಂಗುರಾಜ್ ಚಿತ್ರದ ಛಾಯಾಗ್ರಾಹಕರಾಗಿದ್ದು, ಈ ಹಿಂದೆ ಅವರು ಸ.ಹಿ.ಪ್ರಾ. ಶಾಲೆ ಕಾಸರಗೋಡು ಮತ್ತು ಪ್ರಸ್ತುತ `ಯುವರತ್ನ’ ಚಿತ್ರಗಳಿಗೆ ಕೆಲಸ ಮಾಡಿದಂಥವರು. `ರಾಮಾ ರಾಮಾ ರೇ’ ಖ್ಯಾತಿಯ ನೊಬಿನ್ ಪೌಲ್ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಸಿನಿಮಾಕ್ಕಾಗಿ ಒಟ್ಟು ಐದು ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದ್ದು ಪರದೆಯ ಮೇಲೆ 17ನಿಮಿಷದ ಕತೆಯಾಗಿ ಮೂಡಿ ಬಂದಿದೆ.

Source Credit Filmibeat.com

Niranthara News

Leave a Reply

Your email address will not be published. Required fields are marked *

Next Post

'ಸಿನಿಮಾಗಳತ್ತ ನನ್ನ ಗಮನ' ಎನ್ನುತ್ತಾರೆ ಮಂಗಳೂರಿನ ಗಾನಾ

Tue Nov 12 , 2019
Source Credit Filmibeat.com Pin it Email https://nirantharanews.com/%e0%b2%95%e0%b2%a5%e0%b2%be-%e0%b2%b8%e0%b2%82%e0%b2%97%e0%b2%ae%e0%b2%a6-%e0%b2%92%e0%b2%b3%e0%b2%97%e0%b2%bf%e0%b2%a6%e0%b3%86-%e0%b2%a8%e0%b2%a8%e0%b3%8d%e0%b2%a8-%e0%b2%b8%e0%b2%82%e0%b2%ad/#Z2FuYS0xLTE1NzM ಮಂಗಳೂರಿನಿಂದ ಯುಎಸ್ ಗೆ ಹೋಗಿ, ಬಳಿಕ ಗಾಂಧಿನಗರಕ್ಕೆ ಕಾಲಿಡುವ ತನಕದ ನಿಮ್ಮ ಪಯಣ ಹೇಗಿತ್ತು? ಜನಿಸಿದ್ದು ಮಂಗಳೂರಿನಲ್ಲಿ. ಆದರೆ ಬಾಲ್ಯ ಕಳೆದಿದ್ದು ಕೊಯಂಬತ್ತೂರಿನಲ್ಲಿ. ಪ್ರಾಥಮಿಕ ವಿದ್ಯಾಭ್ಯಾಸ ಮುಗಿಸಿದ ಬಳಿಕ ಮಂಗಳೂರಿಗೆ ವಾಪಸಾದೆ. ಮಂಗಳೂರಿನ ಅಲೊಶಿಯಸ್ ಕಾಲೇಜ್ ನಲ್ಲಿ ಪಿಯುಸಿ ಮಾಡಿ, ಶ್ರೀನಿವಾಸ ಕಾಲೇಜ್ ನಲ್ಲಿ ಇಂಜಿನಿಯರಿಂಗ್ ಮುಗಿಸಿ, ಇನ್ಫೋಸಿಸ್ ನಲ್ಲಿ ವೃತ್ತಿಯಲ್ಲಿದ್ದೆ. ಬಳಿಕ ಯುಎಸ್ ಗೆ ಹೋಗಿ ಅಲ್ಲಿ ಯಾಹೂ ಸಂಸ್ಥೆಗೆ ಸೇರಿಕೊಂಡೆ. ಇದೀಗ ಕನ್ನಡ ಚಿತ್ರದಲ್ಲಿ ನಟಿಸುತ್ತಿದ್ದರೂ ನಾನು ಇಂದಿಗೂ ಯಾಹೂನಲ್ಲೇ ವೃತ್ತಿಯಲ್ಲಿದ್ದೇನೆ. […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links