ಕಂಬಳ ಲೋಕದ ದಾಖಲೆಯ ಸರದಾರ ಶ್ರೀನಿವಾಸ ಗೌಡ

Source Credit NewsKannada.com

ಕಂಬಳ ಲೋಕದ ದಾಖಲೆಯ ಸರದಾರ ಶ್ರೀನಿವಾಸ ಗೌಡ


Deevith S K
  ¦   


Feb 14, 2020 09:30:48 AM (IST)

ಮೂಡುಬಿದಿರೆ : ಬಾಲ್ಯದಲ್ಲಿ ಕೋಣಗಳ ಲಾಲನೆ-ಪಾಲನೆಯಲ್ಲಿ ಆಸಕ್ತಿ ಹೊಂದಿ ಕೋಣಗಳತ್ತ ಆಕರ್ಷಿತರಾಗಿ ಅವುಗಳ ಆರೈಕೆ ಸಹಿತ ಓಟದೊಳಗೆ ಆಟವಾಡುತ್ತಿದ್ದ ಹುಡುಗ ಇಂದು ತೌಳವ ಸಂಸ್ಕೃತಿಯ ಪ್ರತೀಕ, ಜಾನಪದ ಕ್ರೀಡೆಯಾದ ಕಂಬಳದ ಕರೆಗಳಲ್ಲಿ ಕೋಣಗಳನ್ನು ಓಡಿಸುತ್ತಾ ಹಲವಾರು ದಾಖಲೆಗಳೊಂದಿಗೆ ಪದಕಗಳ ಸಿರಿಯನ್ನು ತನ್ನ ಮುಂಡಾಸಿಗೇರಿಸಿಕೊಳ್ಳುವ ಮೂಲಕ “ಕಂಬಳದ ಚಿನ್ನದ ಓಟಗಾರ” ಎಂಬ ಮನ್ನಣೆಗೆ ಭಾಜನರಾಗುತ್ತಿದ್ದಾರೆ ಮೂಡುಬಿದಿರೆ ಸಮೀಪದ ಅಶ್ವತ್ಥಪುರದ ಯುವಕ ಶ್ರೀನಿವಾಸ ಗೌಡ.

 

ಮೂಡುಬಿದಿರೆ ಸಮೀಪದ ಅಶ್ವತ್ಥಪುರದ ಪಂಜುರ್ಲಿಗುಡ್ಡೆಯ ನಿವಾಸಿಗಳಾದ ದೊಂಬಯ್ಯ ಗೌಡ-ಗಿರಿಜಾ ದಂಪತಿಯ ಪುತ್ರ ಶ್ರೀನಿವಾಸ ಗೌಡ. ಸೀನು ಎಂದೇ ಚಿರಪರಿಚಿತರಾಗಿರುವ ಶ್ರೀನಿವಾಸ ಗೌಡ ತನ್ನ ಪ್ರಾಥಮಿಕ ಶಾಲಾ ವಿದ್ಯಾಭ್ಯಾಸದ ಸಂದರ್ಭದಲ್ಲಿ ಅಶ್ವತ್ಥಪುರದ ದಾಸರಬೆಟ್ಟು ಪುರುಷೋತ್ತಮ ಗೌಡ ಅವರ ಕಂಬಳದ ಕೋಣಗಳ ಜೊತೆಗೆ ಆಟವಾಡುತ್ತಿದ್ದ ವೇಳೆ ಅವರನ್ನು ಕಂಬಳ ಕ್ಷೇತ್ರವು ಕೈಬೀಸಿ ಕರೆಯಿತು. ಈ ಆಸಕ್ತಿಗೆ ವೇದಿಕೆ ದೊರೆತದ್ದು 2012ರಲ್ಲಿ ಕಂಬಳ ಅಕಾಡೆಮಿಯು ಕಾರ್ಕಳ ಮಿಯಾರಿನಲ್ಲಿ ಏರ್ಪಡಿಸಿದ ತರಬೇತಿ ಕೇಂದ್ರದಲ್ಲಿ. ಅಲ್ಲಿ ಪೂರ್ಣ ತರಬೇತಿಯನ್ನು ಪಡೆದು ನಂತರ 2013ರಿಂದ ಕಂಬಳದ ಕರೆಗಳಲ್ಲಿ ಕೋಣಗಳನ್ನು ಓಡಿಸುವುದಕ್ಕೆ ಆರಂಭಿಸಿ ಪ್ರಶಸ್ತಿಗಳ ಬೇಟೆಗೆ ಆರಂಭಿಸಿ ಇದೀಗ ಸುಮಾರು 79 ಪದಕಗಳನ್ನು ತನ್ನ ಮುಡಿಗೇರಿಸಿಕೊಂಡಿರುವ ಶ್ರೀನಿವಾಸ ಗೌಡ 2017-18ನೇ ಸಾಲಿನ ಕಂಬಳ ಕೂಟದಲ್ಲಿ “ಚಾಂಪಿಯನ್ ಪ್ರಶಸ್ತಿ ಓಟಗಾರ” ಪ್ರಶಸ್ತಿಗೆ ಆಯ್ಕೆಯಾಗಿ ಕಂಬಳ ಲೋಕದ ದಿಗ್ಗಜರ ಮುಂದೆ ಸೈಯೆನಿಕೊಂಡಿರುವ ತೌಳವ ಪ್ರತಿಭೆ.

 ಕೈತಪ್ಪಿದ ಕ್ರೀಡಾರತ್ನ

ಸಾಧಾರಣ ಯುವಕನಂತೆ ಕಾಣುವ ಶ್ರೀನಿವಾಸ ಅವರು ಕಂಬಳದ ಕರೆಯಲ್ಲಿ ವೇಗವಾಗಿ ಕೋಣಗಳನ್ನು ಓಡಿಸುವುದನ್ನು ನೋಡಿದರೆ ಎಲ್ಲರೂ ಮೂಕವಿಸ್ಮಿತರಾಗುವುದು ಖಂಡಿತ. ಶ್ರೀನಿವಾಸರ ಅಪ್ರತಿಮ ಸಾಧನೆಯನ್ನು ಗಮನಿಸಿ ಆಳ್ವಾಸ್ ಸಂಸ್ಥೆ ಸಹಿತ ಹಲವಾರು ಸೇವಾ ಸಂಸ್ಥೆ, ಸಂಘಟನೆಗಳು ಈಗಾಗಲೇ ಇವರನ್ನು ಗೌರವಿಸಿವೆ. ಅಷ್ಟು ಮಾತ್ರವಲ್ಲದೆ ರಾಜ್ಯ ಸರಕಾರವು ನೀಡುತ್ತಿದ್ದ “ಕ್ರೀಡಾ ರತ್ನ” ಪ್ರಶಸ್ತಿಗೆ ಕಳೆದ ಬಾರಿಯ ಪಟ್ಟಿಯಲ್ಲಿ ಆಯ್ಕೆಗೊಂಡಿರುವುದು ವಿಶೇಷ. ಆದರೆ ಸರಕಾರದ ಬದಲಾವಣೆಯೊಂದಿಗೆ ಪ್ರಶಸ್ತಿ ಇನ್ನೂ ಸಿಗದೆ ಸ್ಥಗಿತಗೊಂಡಿರುವುದು ವಿಪರ್ಯಾಸವೇ ಸರಿ.

 ಕೋಣದ ಯಜಮಾನರ ಬತ್ತದ ಪ್ರೀತಿ:  ಬಾಹುಬಲಿ ಚಿತ್ರದಲ್ಲಿ ನಟನೆಯನ್ನು ಮಾಡಿರುವ ಶ್ರೀನಿವಾಸ ಅವರು ಕಂಬಳದ ಓಟಗಾರರಲ್ಲಿ ಇದೀಗ ಮುಂಚೂಣಿಯಲ್ಲಿರುವ ಓಟಗಾರ. ಇವರು ಹಗ್ಗ ಹಿರಿಯ ವಿಭಾಗದಲ್ಲಿ ಮೂಡುಬಿದಿರೆಯ ಹರ್ಷವರ್ಧನ್ ಪಡಿವಾಳ್ ಮತ್ತು ಪದವು ಕಾನಡ್ಕದ ಕೋಣಗಳನ್ನು, ಹಗ್ಗ ಕಿರಿಯದಲ್ಲಿ ಮಿಜಾರು ಅಶ್ವತ್ಥಪುರದ ಶಕ್ತಿ ಪ್ರಸಾದ್ ಅವರ, ನೇಗಿಲು ಹಿರಿಯದಲ್ಲಿ ಪಾಣಿಲ ಇರುವೈಲಿನ ಬಾಡ ಪೂಜಾರಿಯವರ ಹಾಗೂ ನೇಗಿಲು ಕಿರಿಯದಲ್ಲಿ ಹರ್ಷವರ್ಧನ್ ಪಡಿವಾಳ್ ಅವರ ಕೋಣಗಳನ್ನು ಓಡಿಸಿ ಪದಕಗಳನ್ನು ಪಡೆಯುವ ಮೂಲಕ ಕೋಣದ ಯಜಮಾನರುಗಳ ಪ್ರೀತಿಗೆ ಪಾತ್ರರಾಗಿದ್ದಾರೆ.

 ಹರಿದು ಬಂದ ಸುದ್ದಿ ಮಾದ್ಯಮಗಳು: ನಮ್ಮ ನಡುವಿನ ಶ್ರೀಸಾಮಾನ್ಯನೋರ್ವ ಕಂಬಳ ಜಗತ್ತಿನಲ್ಲಿ ಅವಿಸ್ಮರಣೀಯ ಸಾಧನೆಗೈಯುತ್ತಿರುವ ಶ್ರೀನಿವಾಸ ಗೌಡರನ್ನು ಗುರುತಿಸಲು ರಾಷ್ಟ್ರ ಮಟ್ಟದ ಚಾನೆಲ್‍ಗಳೂ ಸೇರಿದಂತೆ ದೃಶ್ಯ ಮಾಧ್ಯಮಗಳು ಶ್ರೀನಿವಾಸ ಗೌಡರ ನಿವಾಸಕ್ಕೆ ದೌಡಾಯಿಸಿ ಬಂದಿವೆ. ವಿಶ್ವದಾಖಲೆಯ ಮಟ್ಟದ ಸಾಧನೆ ಮಾಡಿರುವ ಈ ಯುವಕ ನಮ್ಮ ಹೆಮ್ಮೆ. ಅವರ ಬಗೆಗಿನ ಅಭಿಮಾನ ಅಚ್ಚರಿಯ ಝರಿಯೇ ಸರಿ. 

ಬಾರಾಡಿ ಕಂಬಳದಲ್ಲಿ ದಾಖಲೆ ನಿರ್ಮಿಸಿದ ಶ್ರೀನಿವಾಸ ಗೌಡ :

ಈ ವರ್ಷ ಬಾರಾಡಿಯಲ್ಲಿ ನಡೆದ 34ನೇ ವರ್ಷದ ಸೂರ್ಯ-ಚಂದ್ರ ಜೋಡುಕರೆ ಕಂಬಳದಲ್ಲಿ 4 ವಿಭಾಗದಲ್ಲಿ 5 ಜೊತೆ ಕೋಣಗಳನ್ನು ಓಡಿಸಿ ಹಗ್ಗ ಹಿರಿಯ ವಿಭಾಗದಲ್ಲಿ ಪ್ರಥಮ, ಹಗ್ಗ ಕಿರಿಯ ವಿಭಾಗದಲ್ಲಿ ಪ್ರಥಮ ಮತ್ತು ದ್ವಿತೀಯ ಹಾಗೂ ನೇಗಿಲು ಕಿರಿಯ ವಿಭಾಗದಲ್ಲಿ ಪ್ರಥಮ ಬಹುಮಾನವನ್ನು ಪಡೆಯುವ ಮೂಲಕ ಶ್ರೀನಿವಾಸ ಗೌಡ ಅವರು ಕಂಬಳ ಕ್ಷೇತ್ರದಲ್ಲಿ ನೂತನ ದಾಖಲೆಯನ್ನು ನಿರ್ಮಿಸಿದ್ದಾರೆ. 

ಚಿನ್ನದ ಓಟಗಾರನ ಬರ್ತ್‍ಡೇ ಸಂಭ್ರಮ!

ಆಪ್ತರ ದೂರವಾಣಿ ಕರೆ, ಸುದ್ದಿ ಜಾಲಗಳು, ಶ್ರೀನಿವಾಸ ಗೌಡರ ಸಾಧನೆಯನ್ನು ಒಂದೆಡೆ ಹಾಡಿಹೊಗಳುತ್ತಿದ್ದರೆ ಶ್ರೀನಿವಾಸ ಗೌಡರು ಗುರುವಾರ ತಮ್ಮ 28ನೇ ವರ್ಷದ ಬರ್ತ್‍ಡೇ ಸಂಭ್ರಮವನ್ನು ವಿಶೇಷ ಮಕ್ಕಳ ನಡುವೆ ಆಚರಿಸಿದ್ದೂ ಕೂಡ ವಿಶೇಷ!

ಸರಳತೆಯ ಸಾಕಾರಮೂರ್ತಿಯಂತಿರುವ ಶ್ರೀನಿವಾಸ ಗೌಡ ಬಿಡುವು ಮಾಡಿಕೊಂಡು ದಿಢೀರ್ ಆಗಿ ಗುರುವಾರ ಮೂಡುಬಿದಿರೆಯ ಸ್ಫೂರ್ತಿ ವಿಶೇಷ ಮಕ್ಕಳ ಶಾಲೆಗೆ ಬೆಳಿಗ್ಗೆ ಹನ್ನೊಂದೂವರೆ ಗಂಟೆಗೆ ತೆರಳಿ ಮಕ್ಕಳೊಂದಿಗೆ ಕೇಕ್ ಕತ್ತರಿಸಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಮಕ್ಕಳಿಗೆಲ್ಲ ಸಿಹಿತಿಂಡಿ, ಐಸ್ ಕ್ರೀಂ ಹಂಚಿ ಸಂತೋಷಪಟ್ಟರು. ಮಕ್ಕಳೂ ಶ್ರೀನಿವಾಸ ಗೌಡರಿಗೆ ಸಿಹಿ ತಿನ್ನಿಸಿದರು. ಶಾಲಾ ಮುಖ್ಯಸ್ಥರಾದ ಪ್ರಕಾಶ್ ಶೆಟ್ಟಿಗಾರ್, ಶಿಕ್ಷಕರು, ಪತ್ರಕರ್ತೆ ಪ್ರೇಮಶ್ರೀ, ಸ್ನೇಹಿತ ದಿನೇಶ್ ಅಳಿಯೂರು ಈ ಸಂದರ್ಭದಲ್ಲಿ ಜತೆಗಿದ್ದರು.

 ಕುಡುಬಿ ಜನಾಂಗದ “ಕ್ರೀಡಾ ಸಾಧಕ”ನಾಗಿರುವ ಶ್ರೀನಿವಾಸ ಗೌಡ “ತುಳುನಾಡ್ದ ಮಗೆ”.

ಕಂಬಳ ಕ್ಷೇತ್ರದಲ್ಲಿ ಇನ್ನಷ್ಟು ಪದಕಗಳನ್ನು ಪಡೆಯುವ ಮೂಲಕ ಜಾನಪದ ಕ್ರೀಡೆಯಲ್ಲಿ ರಾಜ್ಯ-ರಾಷ್ಟ್ರಮಟ್ಟದಲ್ಲಿ ಅತೀ ವೇಗದ ಓಟಗಾರನೆಂಬ ಕೀರ್ತಿಗೆ ಕಾಂತಿ ತುಂಬಲಿ. ಮುಂಬರುವ ಕಂಬಳದ ಕರೆಯಲ್ಲಿ ಇವರ ಪ್ರತಿಭೆ ವಿರಾಜಮಾನವಾಗಿ ಕಂಗೊಳಿಸಲಿ. ಶ್ರೀನಿವಾಸ ಗೌಡರು ತುಳು ಸಂಸ್ಕøತಿಯನ್ನು ವಿಶ್ವದೆತ್ತರಕ್ಕೆ ಸಾರುವ ಕಂಬಳದ ರಾಯಭಾರಿಯಾಗಲಿ.

Source Credit NewsKannada.com

“This story was auto-published from a syndicated feed & Website. No part of the story has been edited by Niranthara News”

Niranthara News

Leave a Reply

Your email address will not be published. Required fields are marked *

Next Post

ಉಡುಪಿ: ಬಟ್ಟೆಯನ್ನು ಸಾಲಾಗಿ ಉರಿಸಿ ಹರಕೆ ಸಲ್ಲಿಸುವ ವಿಶಿಷ್ಟವಾದ ಹಚ್ಚಡ ಸೇವೆ

Fri Feb 14 , 2020
Source Credit TheMangaloreMirror.in ಉಡುಪಿ: ಬಟ್ಟೆಯನ್ನು ಸಾಲಾಗಿ ಉರಿಸಿ ಹರಕೆ ಸಲ್ಲಿಸುವ ವಿಶಿಷ್ಟವಾದ ಹಚ್ಚಡ ಸೇವೆ ಉಡುಪಿ : ವಿವಿಧ ರೀತಿಯ ಹರಕೆಗಳನ್ನು ದೇವರಿಗೆ ಅರ್ಪಿಸುವುದು ವಾಡಿಕೆ. ಆದರೆ ಉಡುಪಿಯಲ್ಲಿ ನಡೆಯುವ ರಾತ್ರಿ ರಥೋತ್ಸವದ ಸಂದರ್ಭ ದೇವರನ್ನು ಕಾಣುವುದಕ್ಕೋಸ್ಕರವಾಗಿ ಬಟ್ಟೆಗೆ ಬೆಂಕಿ ಹಚ್ಚಿ ದೇವರ ದರ್ಶನ ಮಾಡುವ ವಿಶಿಷ್ಟ ಸೇವೆ ನಡೆಸಲಾಗುತ್ತಿದೆ. ಎಂಟು ಶತಮಾನಗಳ ಇತಿಹಾಸ ಈ ಸೇವೆಗೆ ಇದೆ. Pin it Email https://nirantharanews.com/%e0%b2%95%e0%b2%82%e0%b2%ac%e0%b2%b3-%e0%b2%b2%e0%b3%8b%e0%b2%95%e0%b2%a6-%e0%b2%a6%e0%b2%be%e0%b2%96%e0%b2%b2%e0%b3%86%e0%b2%af-%e0%b2%b8%e0%b2%b0%e0%b2%a6%e0%b2%be%e0%b2%b0-%e0%b2%b6%e0%b3%8d/#eUg1QkFFQUFBQUF ಉಡುಪಿಯಿಂದ ಸ್ವಲ್ಪ ದೂರದಲ್ಲಿರುವ ಹೆರ್ಗ ದುರ್ಗಾಪರಮೇಶ್ವರಿ ಕ್ಷೇತ್ರದಲ್ಲಿ ಈ ಸೇವೆಯನ್ನು ನಡೆಸಲಾಗುತ್ತಿದೆ. ಸುಮಾರು ಎಂಟು ಶತಮಾನಗಳ ಹಿಂದೆ […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links